ಬಾರಯ್ಯ ಗೋವಿಂದ ಬಂಧಕವ ಬಿಡಿಸೋ / Barayya Govinda bandhakava bidiso

ಬಾರಯ್ಯ ಗೋವಿಂದ ಬಂಧಕವ ಬಿಡಿಸೋ||2||
ದೇಹವೆಂಬುವ ಬಂಡಿ ಎಳೆದು
ಬಳಲಿದೆನೋ…     ||ಬಾರಯ್ಯ||
ಬಾರಯ್ಯ ಗೋವಿಂದ ಬಂಧಕವ ಬಿಡಿಸೋ…..

ಮಲಮೂತ್ರ  ದುರ್ಮಾಂಸ 
ಕರುಳ ಒಳ ದುರ್ಗಂಧ
ಎಲುಬು ಗುಂಡಿಗೆ ಧ್ರತವು ,ಹೊದಿಕೆ ಚರ್ಮ ||
ಇದರೊಳಗೆ ಸಿಕ್ಕಿದೆನು
ಇನ್ನಾರು ಗತಿ ಎನಗೆ ||
ಬಿಡಿಸಯ್ಯಾ ಭವಬಂಧ
ಎನ್ನೊಡೆಯ ಗೋವಿಂದ ||ಬಾರಯ್ಯ||

ಇನ್ನು ಜನ್ಮವು ಸಾಕು ,ಇದನ್ನು ವರ್ಜಿಸಬೇಕು
ಮನ್ಮಥನ ಠಾಣ್ಯವಿದು , ಮರುಳು ಮಾಡಿ ||
ಅಂತಕನ ಪಟ್ಟನಕ್ಕೆ ಹಾದಿ ನೋಡುತ್ತಲಿದೆ||2||
ದಯವಿಟ್ಟು ಸಲಹೋ ವೈಕುಂಠ ವಿಠ್ಠಲನೆ  ||ಬಾರಯ್ಯ||

ಅತಿಮೂರ್ಖ ನಾನಯ್ಯ ,ಅಜ್ಞಾನ ಬಿಡಿಸಯ್ಯಾ
ನಿಜವಲ್ಲ ಇ ಕಾಯ , ನಂಬಲಾರೆನಯ್ಯ ||
ಭಯಪಟ್ಟು ನಿಮ್ಮಪಾದ
ಭಜಿಸಿದೆನು ನಾನಯ್ಯ||ಭಯ||
ಶ್ರೀ ಚೆಲುವ ರಂಗಯ್ಯ ಸಲಹಬೇಕಯ್ಯ  ||ಬಾರಯ್ಯ||

ಕನಕದಾಸರ ಮನೆಯ
ಕಸ ಗುಡಿಸೋ ಬಡ ದಾಸ
ಪುರಂದರದಾಸರಿಗೆ ಮಣಿ ಮಾಡೋ ದಾಸ ||
ನಿನ್ನ ನಂಬಿದ ದಾಸ
ಎನ್ನ ಬಿಡುವುದು ಮೋಸ ||
ಕೈವಾರದ ಪುರವಾಸ,ಅಮರನಾರಯಣೇಶ ||ಬಾರಯ್ಯ||

Lyrics in English

Baarayya Govinda bandhakava bidiso ||2||
Dehavembuva bandi eLedhu
BaLalideno… ||Baarayya||
Baarayya Govinda bandhakava bidiso…..

Malamoothra durmaamsa
Karula oLaga durgandha
Elubu guNDige dhrutavu, hodike charma ||
Idarolage sikkidenu
Innaaru gati enage ||
Bidisayyaa bhava bandha
Ennodayya Govinda ||Baarayya||

Innu janmavu saaku, idannu varjisabeku
Manmathana thaanyavidu, maruLu maadi ||
Anthakana paTTanakke haadi nooduttalide ||2||
Dayavittu salaho Vaikuntha Vitthalane ||Baarayya||

Athimoorkha naanayya, ajnaana bidisayyaa
Nijavalla ee kaaya, nambalaarenayya ||
Bhayapattu nimma paada
Bhajisidenu naanayya ||Bhaya||
Shri Cheluva Rangayya salahabekayya ||Baarayya||

Kanakadaasara maneya
Kasa gudiso bada daasa
Purandaradaasarige maNi maado daasa ||
Ninna nambida daasa
Enna biduvudu mosa ||
Kaivaarada puravaasa, Amara Narayanesha ||Baarayya||

ಉಗಾಭೋಗ / ಕಮಲಜನು ನಿನ್ನ ಪಾದಕಮಲವನು

ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ?
ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ ನಮೋ ನಮೋ ಎಂಬೆ ಪುರಂದರವಿಠಲ

ಸಾರಾಂಶ :

ಕಮಲಜನು ನಿನ್ನ ಪಾದಕಮಲವನು ತೊಳೆದಿಹನು
ಕಮಲದಿಂದ ಹುಟ್ಟಿದ ಬ್ರಹ್ಮನು ನಿನ್ನ ಪಾದಕಮಲಗಳನ್ನು ತೊಳೆದಿದ್ದಾನೆ.

ಉಮಾಪತಿಯು ನಿನ್ನ ಪಾದಜಲವ ಪೊತ್ತಿಹನು
ಉಮಾಪತಿ (ಪಾರ್ವತಿಯ ಪತಿ ಶಿವನು) ನಿನ್ನ ಪಾದತೀರ್ಥವನ್ನು ತನ್ನ ಮೇಲೆ ಧರಿಸಿದ್ದಾನೆ.

ಯಮಜ ಮಾಡುವ ರಾಜಸೂಯಾಗದಲ್ಲಿ ಮಮಕರಿಸಿದೆ ಎಂತೊ ಕಾಲ ತೊಳೆವ ಊಳಿಗವ ?
ಯುಧಿಷ್ಠಿರನು ಮಾಡಿದ ರಾಜಸೂಯ ಯಾಗದಲ್ಲಿ ನೀನು ಪ್ರೀತಿಯಿಂದ ಪಾದಪ್ರಕ್ಷಾಳನೆ ಸೇವೆ ಮಾಡಿದೆಯಲ್ಲ — ಇಂತಹ ಸೇವೆಯನ್ನು ಎಷ್ಟು ಕಾಲದಿಂದ ಮಾಡುತ್ತಿದ್ದೀಯೋ?

ಮಮಪ್ರಾಣಾ ಹಿ ಪಾಂಡವಾಃ ಎಂಬ ಬಿರುದಿಗಾಗಿ
“ಪಾಂಡವರು ನನ್ನ ಪ್ರಾಣ” ಎಂಬ ನಿನ್ನ ಬಿರುದನ್ನು ಕಾಯ್ದುಕೊಳ್ಳಲು.

ನಮೋ ನಮೋ ಎಂಬೆ ಪುರಂದರವಿಠಲ
ಹೀಗೆ, ಪುರಂದರ ವಿಠಲನೇ, ನಿನಗೆ ನಾನು ಮರುಮರು ನಮಸ್ಕಾರ ಮಾಡುತ್ತೇನೆ.


Lyrics in English

Kamalajanu ninna paada kamalavanu toledihanu
Umaapatiyu ninna paada jalava pottihanu
Yamaja maaduva Raajasooyaagadalalli mamakaraside ento kaala toleva ooligava?
Mama praanaa hi Paandavaah emba birudigaagi
Namo namo embe Purandara Vitthala


ಶಾರದಾಂಬಿಕೆ ನಿತ್ಯ ಶಾರದಾ ಕೊಡು / Sharadambike Nitya sharadambe kodu

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ |
ಸಾರುವೆ ನಾ ನಿನ್ನ ||ಪ||

ಪುಂಡರೀಕ ನಯನೆ ಪುಂಡರೀಕನ ರಾಣಿ
ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ |
ಪುಂಡರೀಕನಾಥನುತೆ ಪುಂಡರೀಕವೆ ನಮಗೆ || 1 ||

ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |
ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |
ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ || 2 ||

ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |
ಕೌಂಶಿಕವೇಣಿ ಕರುಣಿ |
ಕೌಂಶಿಕ ವಿಜಯವಿಠ್ಠಲನಲ್ಲಿ
ಕೌಂಶಿಕದವನ ಮಾಡು || 3 ||

Lyrics in English

Sharadaambike nitya Sharadaa kodu enage |
Saaruve naa ninna ||Pa||

Pundareeka nayane Pundareekana raani
Pundareeka gamane | Pundareeka charmaambara |
Pundareeka naathanute Pundareekave namage || 1 ||

Shuchi shareerale enna shuchiya maaduva ee |
Shuchiyolage ninna keerthi shuchiyaagi manadalli |
Shuchi jana pelutide | Shuchi maargavane torise || 2 ||

Kaumshika vaaniye Kaumshika bimbasadane |
Kaumshika veni karuni |
Kaumshika Vijaya Vitthalanalli
Kaumshikadavana maadu || 3 ||

****************************************************************************

ಉಗಾಭೋಗ / ನಾರಾಯಣನ ನಾಮಕೆ ಇತರ ನಾಮಗಳೆಣೆಯುಂಟೆ / ugabhoga / narayanana namake tiara namagaleneyunte

ಉಗಾಭೋಗ

ನಾರಾಯಣನ ನಾಮಕೆ ಇತರ ನಾಮಗಳೆಣೆಯುಂಟೆ
ತಾರತಮ್ಯದಿ ದೇವತೆಗಳೊಳಗೆ ಹಿರಿತನಕೆ ಸಮವುಂಟೆ
ಧಾರುಣಿಯೊಳಗನ್ನದಾನಕೆ ಸಮಾನ ಉಂಟೆ
ಧೀರ ವಿಜಯವಿಠಲನ್ನ ದ್ವಾದಶಿ ತಿಥಿಗೆ ಸಮವುಂಟೆ॥

Lyrics in English

Narayanana namake tiara namagaleneyunte
taratamyadi devategalolage hiritanake samavunte
dharuniyolagannadanake damana unte
dheera vijayavittalana dwadashi tithige samanunte ||

ಉಗಾಭೋಗ / ಶೇಷನಾಗಿ ಶ್ರೀಶನ ಶಯನಕೆ ದಿವ್ಯ / Ugabhoga – sheshanagi shreeshane shayanake

ಉಗಾಭೋಗ

ಶೇಷನಾಗಿ ಶ್ರೀಶನ ಶಯನಕೆ ದಿವ್ಯಮಂಚವಾದೆ
ಶೇಷನಾಗಿ ಅಶೇಷಜೀವರಿಗೆ ಅಭಿಮಾನಿಯಾದೆ
ಶೇಷನಾಗಿ ಈ ಸರಸಿಜಜಾಂಡಕ್ಕೆ ಆಧಾರನಾದೆ
ಶೇಷನಾಗಿ ರುದ್ರನ ಸರ್ವಾಂಗಕ್ಕೆ ಭೂಷಣನಾದೆ
ಶೇಷನಾಗಿ ಕೃಷ್ಣಗೆ ಹಿರಿಯನಾಗಿ ಮನ್ನಿಸಿಕೊಂಡೆ
ಶೇಷನಾಗಿ ಸಾಸಿರ ಜಿಹ್ವೆ ಯಲಿ ಹರಿಯ ಕೊಂಡಾಡಿದೆ
ವಾಸವಾದ್ಯರ ನಿನ್ನುದರದಲ್ಲಿ ತಾಳಿದೆ ಪ್ರಳಯಕಾಲದಲ್ಲಿ
ವಿಶೇಷಮಹಿಮ *ರಘುಪತಿವಿಠಲನ್ನ* ಪ್ರ. ವೇಶಿಸುವೆ ಬೊಮ್ಮನನುಸರಿಸಿ ||

Lyrics in English

Sheshanagi shreeshana shayanake divyamannchavade
sheshanagi asheshajeevarige abhimaniyade
sheshanagi e sarasijajandakke adharanade
sheshanagi rudrana sarvangakke bhushananade
sheshanagi krishnage hiriyanagi mannisikonde
sheshanagi sasira jihveyali hariya kondadide
vasavadyara ninnudaradalli talide pralayakaladalli
visheshamahima raghupativittalanna praveshisuve bommananusarisi ||

***********************************************************************************************************

ಶ್ರೀ ಜಗನ್ನಾಥದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀ ನರಸಿಂಹ ಸುಳಾದಿ

ಶ್ರೀ ಜಗನ್ನಾಥದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀ ನರಸಿಂಹ ಸುಳಾದಿ.

ಧ್ರುವತಾಳ

ದುರಿತವನ ಕುಠಾರಿ ದುರ್ಜನ ಕುಲವೈರಿ
ಶರಣಾಗತ ವಜ್ರ ಪಂಜರ ಕುಂಜರ-
ವರ ಸಂರಕ್ಷಕ ಜನ್ಮ ಮರಣರಹಿತ ಮಹಿತ
ಪರಮ ಕರುಣಾಸಿಂಧು ಭಕುತ ಬಂಧು
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ
ಹರಿಯೆ ಕ್ಷರಾಕ್ಷರ ಪುರುಷೋತ್ತಮ
ಉರುಗಾಯ ವೈಕುಂಠವರ ಮಂದಿರ ಚಂದಿರ
ತರಣಿಕೋಟಿ ಸಂಕಾಶ ವಿಮಲಕೇಶ
ಧುರದೊಳಗರ್ಜುನನ ತುರಗ ನಡೆಸಿದ ಸಂ-
ಗರ ಭಯಂಕರ ಲೋಕೈಕ ವೀರ
ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ
ಮೊರೆಹೊಕ್ಕ ದಾಸಗೆ ಬಂದ ಭಯವ
ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ
ಸರುವರಂತರ್ಯಾಮಿ ಲೋಕೈಕಸ್ವಾಮಿ
ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ
ಅರಿದೆನೊ ನೀನೆಮ್ಮ ಪೊರೆವುದೀಗ
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ-
ಪರಿಪಾಲಕನೆಂಬ ಬಿರುದು ನಿನ್ನದಲ್ಲವೆ॥೧॥

ಮಟ್ಟತಾಳ

ವಿಧಿಪಿತ ನೀನಲ್ಲದೆ ನಿಧಿಪತಿಗಳು ಉಂಟೆ
ಸದನನಾಗಿ ಇರ್ಪೆ ನಿನ್ನ ದಾಸರಿಗಾಗಿ
ಮಧುಸೂದನ ಜಗನ್ನಾಥವಿಠ್ಠಲರೇಯ
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ ॥೨॥

ರೂಪಕತಾಳ

ಮೂರು ಲೋಕ ಸ್ವಾಮಿ ಸರ್ವಜ್ಞ ಸುಖಪೂರ್ಣ
ಪ್ರೇರಣ ಸಾಕ್ಷಿ ಕಾರಣಕಾರ್ಯ ದೋಷ ವಿ-
ದೂರ ಸದ್ಗುಣ ಸಾಂದ್ರ ಸಜ್ಜನಾಂಬುಧಿ ಚಂದ್ರ
ಭಾರಕರ್ತ ಜಗಕೆ ನೀನಿರೆ ಎಮ್ಮ ಮ-
ನೋರಥ ಸಲಿಸುವುದೇನಸಾಧ್ಯವೋ ನಿನಗೆ
ಕ್ರ್ರೂರ ಮಾನವರ ಸಂಹಾರ ಮಾಡಿಸು ಗುರು-
ಮಾರುತನಿಂದತಿ ಶೀಘ್ರವಾಗೀ
ನೀ ರಕ್ಷಿಸೆಂದು ಪ್ರಾರ್ಥಿಸುವ ಭಕ್ತಗೆ ಭೂರಿ
ಸಾರ ಭಾಗ್ಯವನಿತ್ತು ಕೃಪೆಮಾಡು ಅನುದಿನ
ಶೂರ ಜಗನ್ನಾಥವಿಠ್ಠಲ ನೀನಲ್ಲದಿ-
ನ್ನಾರು ಭಕ್ತರು ಕಾವ ಕರುಣಿಗಳು ಜಗದೀ॥೩॥

ಝಂಪೆತಾಳ

ಪಿತನಿಂದ ನೊಂದ ಪ್ರಹ್ಲಾದನ ಕಾಯ್ದೆ, ದೇ-
ವತೆಗಳಿಗೆ ಬಂದ ಭಯ ಪರಿಹರಿಸಿ ದಯದಿ ದ್ರೌ-
ಪದಿಯ ಮೊರೆ ಕೇಳಿ ದಿವ್ಯಾಂಬರವ ಕರುಣಿಸಿದೆ
ಕ್ಷಿತಿಜನಾಲಯದಿ ಬಳಲುವ ಬಾಲೆಯರ ದ್ವಾರಾ-
ವತಿಗೆ ಕರೆದೊಯ್ದು ಒಲಿದವರ ಪೋಷಿಸಿದೆ ಮಾ-
ರುತಿಯ ಕರದಿಂದ ಬೃಹದ್ರಥನ ಕುವರನ ಕೊಲಿಸಿ
ಪೃಥಿವಿಪರನ ಬಿಡಿಸಿ ಪಾಲಿಸಿದೆ ಕರುಣದಲಿ ಕುರು
ಪೃತನದೊಳು ಪಾಂಡವರ ಗೆಲಿಸಿ ಕೀರ್ತಿಯ ಪಡೆದೆ
ಶತಮೋಹನಾಸ್ತ್ರದಿಂದಲಿ ಗರ್ಭದೊಳಗೆ ಪೀ-
ಡಿತನಾದ ಶಿಶು ಪರೀಕ್ಷಿತನ ಸಂತೈಸಿದೇ
ಶಿತಿಕಂಠಗೊಲಿದು ಸಾರಥಿಯಾಗಿ ಮುಪ್ಪುರದ
ಸತಿಯರನ ಕೊಲಿಸಿ ಕೀರುತಿಯಿತ್ತೆ ಭಕುತನಿಗೆ
ಮಿತಿಯುಂಟೆ ನಿನ್ನ ಕರುಣಕ್ಕೆ ದೇವವರ್ಯ ಸಾಂ-
ಪ್ರತ ಬೇಡಿಕೊಂಬೆ ಬಿನ್ನಪ ಕೇಳಜಸ್ರ ಸಂ-
ತುತಿಪ ಭಕುತನ ಮನೋರಥವ ಪೂರೈಸು ಸು-
ವೃತನಾಮ ಶ್ರೀಜಗನ್ನಾಥವಿಠ್ಠಲ ಭಾಗ-
ವತಜನ ಪ್ರೀಯ ನೀನೆ ಗತಿ ಎಮಗೆ ಇಹಪರದಿ ॥೪॥

ತ್ರಿವಿಡಿತಾಳ

ನೀ ಸಲಹಲಿನ್ಯಾರು ಬಂದ-
ಡ್ಡೈಸುವರು ಮೂಲೋಕದೊಳಹೊರಗೆ
ಈ ಸಮಸ್ತ ದಿವೌಕಸರು ನಿನ-
ಗೆ ಸಮರ್ಪಕವಾದ ಕಾರ್ಯ ಮ-
ಹಾ ಸುಖದಿ ನಡೆಸುವರು ನಿರುತ ಲಕ್ಷ್ಮೀ-
ದಾಸಿ ಎನಿಪಳು ನಿನ್ನ ಮನೆಯಲ್ಲಿ
ದೇಶ ಕಾಲಾಗುಣಕರ್ಮಾದಿಗಳು ನಿನಗಾ-
ವಾಸ ಯೋಗ್ಯಸ್ಥಾನವೆನಿಪವು
ಈಶಲೋಕತ್ರಯಕೆ ಲೇಸಾಯಾಸ ಕಾಣೆನೋ ಕರು-
ಣಾ ಸಮುದ್ರನೆ ಒಲಿದು ಎಮ್ಮ ಅಭಿ-
ಲಾಷೆ ಪೂರೈಸೆಂದು ಬೇಡಿಕೊಂಬೆನಕೊ; ವೇದ
ವ್ಯಾಸ ಕೀಟಗೆ ಒಲಿದು ಕೊಟ್ಟೆ ಮ-
ಹಾಸಿಂಹಾಸನವೇರಿಸಿ ಪೊರೆದೆಯೋ ಪ-
ರಾಶರಾತ್ಮಜ ನಿನ್ನ ಗುಣಗಣಬಣ್ಣಿಸೆ
ನಾ ಸಮರ್ಥನೆ ಎಂದಿಗಾದರು ದೇವ
ನೀ ಸುಲಭನೆಂದಾಶ್ರಯಿಸಿಂದು ನಾ ಬಿ-
ನ್ನೈಸಿದೆನೊ ಈ ರೀತಿಯಲ್ಲಿ ಸ-
ರ್ವಾಸುನಿಲಯ ಜಗನ್ನಾಥವಿಠಲರೇಯ
ಈಸು ಮಾತುಗಳ್ಯಾಕೆ ಮನ್ಮನ-
ದಾಸೆ ಪೂರ್ತಿಯ ಮಾಡಿ ಎಮ್ಮನು-
ದಾಸಿಸದೆ ದಯದಿಂದ ನೋಳ್ಪುದು॥೫॥

ಅಟ್ಟತಾಳ

ನಿಗಮ ತತಿಗಳಿಗೆ ವೇದ್ಯವಾದ ನಿನ್ನ
ಅಗಣಿತ ಮಹಿಮೆ ಲಕುಮಿ ಬೊಮ್ಮ ಭವಾ-
ದಿಗಳು ತಾವರಿಯರು ಸಾಕಲ್ಯದಿಮಂದ ಜೀ-
ವಿಗಳಿಗೆ ಗೋಚರಿಸುವುದೆ ನಿನ್ನರೂಪ
ಭಗವಂತ ನೀನೆ ದಯಾಳು ಎಂದರಿದು ನಾ
ಪೊಗಳಿದೆನೊ ಯಥಾಮತಿಯೊಳಗೆ ಲೇಶ
ಬಗೆಯಾದೀರೆನ್ನಪರಾಧ ಕೋಟಿಗಳನು
ಜಗತೀಪತಿ ತನ್ನ ಮಗುವಿನ ತೊದಲು ಮಾ-
ತುಗಳನು ಕೇಳಿ ತಾ ನಗುತಲಿ ಕಾಮಿತ
ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ
ಬಿಗಿದಪ್ಪಿ ಮೋದಿಪನಲ್ಲದೆ ಶಿಶುವನು
ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈ-
ಯುಗನೆ ಬಿಡದೆ ಪಾಡಿ ಪೊಗುಳುವ ದಾಸಗೀ
ಬಗೆ ಬಡತನವ್ಯಾಕೊ ಸಂಸಾರದೊಳಗೆ ನಾ-
ಲ್ಮೊಗನಯ್ಯ ಅರ್ಥ ಕಾಮಗಳೊಳಗಿಪ್ಪ ಈ
ರ್ವಗೆ ರೂಪವೊಂದಾಗೆ ಆವುದಸಾಧ್ಯವೊ
ಗಗನ ಭೂ ಪಾತಾಳ ವ್ಯಾಪ್ತ ರೂಪನೆ ಕರ
ಮುಗಿವೆ ಗೋಚರಿಸೆಮ್ಮದೃಗಯುಗಗಳಿಗಿಂದು
ಯುಗಾಕರ್ತ ಶ್ರೀಜಗನ್ನಾಥವಿಠಲ ನರ-
ಮೃಗನಾಗಿ ಸ್ತಂಭದಿಂದೊಗೆದು ಬಂದೊದಗಿದೆ ॥೬॥

ಏಕತಾಳ

ಶ್ರೀನಿಧಿ ಪ್ರತಿದೇಹಂಗಳಲ್ಲಿ ಗತಿ
ನೀನಲ್ಲದೆ ಎನಗಾರಿಹ ಪರದಲ್ಲಿ
ಆ ನಳಿನಭವ ಭವಾದ್ಯನಿಮೀಷ-
ರ ನಿಜಾನಂದವರಿತು ಫಲಗಳ ಕೊಡುವಿ ಮ-
ಹಾನುಭಾವ ಎಮ್ಮಭಿಮತ ಸಲಿಸುವು
ದೇನಚ್ಚರಿ ನಿನ್ನರಸಿ ಲಕುಮಿ ಕಡೆ-
ಗಾಣಳು ಪರಮೈಶ್ವರ್ಯದ ಪ್ರಾಂತ ಚಿ-
ದಾನಂದಮಯನೆ ಪ್ರಣತರ ಅಧಿಕಾ-
ರಾನುಸಾರ ಸುಖ ವನಧೀಯೊಳೊಲ್ಯಾಡಿಸುವಿ
ದಾನಿಗಳರಸ ಮನಾದಿಕರಣಗಳಭಿ-
ಮಾನಿಗಳೊಡೆಯನೆನಿಸುವ ಮುಖ್ಯ
ಪ್ರಾಣ ಪತಿಗೆ ನೂತನ ವಿಜ್ಞಾಪನ
ವೇನುಂಟಿನ್ನನುದಿನದಲಿ ಮಾಳ್ಪುದು
ಮಾನದ ಗುರು ಜಗನ್ನಾಥವಿಠ್ಠಲ ಕರು-
ಣಾನಿಧಿ ಸರ್ವರ ಸುಲಭ ನೀನಲ್ಲದೆ ॥೭॥

ಜತೆ

ಚಟುಲ ಕಾರ್ಯಗಳ ಸಂಘಟನೆ ಮಾಡಿಸುವಿ ನಿ-
ಷ್ಕುಟಿಲ ಜಗನ್ನಾಥವಿಠ್ಠಲ ದೇವೋತ್ತಮ ॥೮॥

ಇದ ಕೊಳ್ಳಿ ಇದಕೊಳ್ಳಿ ಭವರೋಗಕೌಷಧವನು / Ida kolli idakolli bhavarogakoushadhavanu

ಇದ ಕೊಳ್ಳಿ ಇದಕೊಳ್ಳಿ ಭವರೋಗಕೌಷಧವನು ||ಪ||

ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ||

ವಾಸುದೇವನ ನಾಮ ವಾತವಿಧ್ವಂಸಿನಿ
ಜನಾರ್ದನನ ನಾಮ ಜ್ವರಾಂಕುಶ
ಮಾಧವನ ನಾಮವೇ ಮನಗಂಡ ಮಂಡೂರ
ಮಂಗಳಾತ್ಮಕ ನಾಮ ಮಾಲ್ಯವಸಂತ ||

ಚಿಂತಾಯಕನ ನಾಮ ತ್ರೈಲೋಕ್ಯ ಚಿಂತಾಮಣಿ
ಭುಜಗಶಯನನ ನಾಮ ಭೂಪತಿಮಾತ್ರೆ
ರಾಜೀವಲೋಚನನ ನಾಮ ರಸಕರ್ಪೂರ
ಸೀತಾಪತಿಯ ನಾಮ ದಿವ್ಯ ಸಿಂಧೂರ ||

ನಾರಾಯಣನ ನಾಮ ದಿವ್ಯ ತಾಮ್ರಭಸ್ಮ
ಲೋಕದೊಡೆಯನ ನಾಮ ಲೋಹಭಸ್ಮ
ವೈಕುಂಠಪತಿಯೆಂಬ ವಂಗಭಸ್ಮವ ಕೊಳ್ಳಿ
ಶ್ರೀನಿವಾಸನ ನಾಮ ಸ್ವರ್ಣಭಸ್ಮ ||

ರಾಮಚಂದ್ರನೆಂಬ ಪೂರ್ಣಚಂದ್ರೋದಯವು
ಕೃಷ್ಣಕೃಷ್ಣನೆಂಬ ಶ್ಲೇಷ್ಮಕುಠಾರ
ವಾರಿಜಾಂಬಕನೆಂಬ ವಸಂತಕುಸುಮಾಕರ
ಕಮಲನಾಭನೆಂಬ ಕರ್ಣಚೂರ್ಣವಿದಕೊ ||

ಇದನು ಕೊಂಡವರ ಪೆಸರನು ಪೇಳುವೆನು ಕೇಳಿ
ಮುದದಿ ಪ್ರಹ್ಲಾದ ಮುಚುಕುಂದ ಧ್ರುವನು
ಸದಮಲೆ ದ್ರೌಪದಿಯು ಅಜಮಿಳನು ಬದುಕಿದರು
ಪದುಮಾಕ್ಷ ಪುರಂದರವಿಠಲನೆಂಬೌಷಧವ ||

ಶ್ರೀ ಪುರಂದರ ದಾಸರ ಕೃತಿ

Lyrics in English

Ida koḷḷi idakoḷḷi bhavarōgakauṣadhavanu ||pa||

Indriyajaisuvude idake icchāpathya ||a.pa||

Vāsudēvana nāma vātavidhvamsini
Janārdanana nāma jvarānkuśa
Mādhavana nāmavē managaṇḍa maṇḍūra
Mangaḷātmaka nāma mālyavasanta ||

Chintāyakana nāma trailōkya chintāmaṇi
Bhujagaśhayanana nāma bhūpatimātre
Rājīvalōchanana nāma rasakarpūra
Sītāpatiya nāma divya sindhūra ||

Nārāyaṇana nāma divya tāmrabhasma
Lōkadōḍeyana nāma lōhabhasma
Vaikuṇṭhapatiyemba vangabhasmava koḷḷi
Śrīnivāsana nāma svarṇabhasma ||

Rāmachandranemba pūrṇachandrōdayavu
Kṛṣhṇakṛṣṇanemba ślēṣhmakuṭhāra
Vārijāmbakanemba vasantakusumākara
Kamalanābhanemba karṇacūrṇavidako ||

Idanu koṇḍavara pesarana pēḷuvenu kēḷi
Mudadi prahlāda muchukunda dhruvanu
Sadamale draupadiyu ajamiḷanu badukidaru
Padumākṣha purandaraviṭhalanembauṣadhava ||

ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸನೆಂದೆನಿಸ / Deshadhipati narahariya ninnaya pada

ಕೃತಿಕಾರರು : ಶ್ರೀ ಕನಕದಾಸರು

ದೇಶಾಧಿಪತಿ ನರಹರಿಯೆ ನಿನ್ನಯ ಪಾದ |
ದಾಸರ ದಾಸನೆಂದೆನಿಸಬೇಕೆನ್ನ ||ಪ||

ರಜತಮೋಗುಣ ಪ್ರವರ್ತಕ ಮೂಲಾಂತರದಿಂ |
ಯಜಮಾನತನದಹಂಕಾರವನು ಒಲ್ಲೆ ||
ಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜ |
ರಜ ಭಜಕರ ಭಜಕನೆಂದೆನಿಸೆನ್ನ ||೧||

ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ |
ತ್ತುರಿ ತಿಲಕವನಿಡುವುದ ನಾನೊಲ್ಲೆ ||
ಸಿರಿ ಊರ್ಧ್ವಪುಂಡ್ರ ದ್ವಾದಶನಾಮವಿಡುವವರ |
ಪರಿಚಾರಕರ ಪರಿಚಾರಕನೆನಿಸೆನ್ನ ||೨||

ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನು |
ಆದರದ ಅಮೃತಾನ್ನ ಉಣುವುದನೊಲ್ಲೆ |
ಬೋಧೆಯನು ಹೇಳುವ ಕೇಳುವ ಹರಿದಾಸರ |
ಪಾದತೀರ್ಥ ಪ್ರಸಾದವನುಣಿಸೆನ್ನ ||೩||

ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿ |
ಶೀಲರಹಿತ ಬ್ರಾಹ್ಮಣನಾಗಲೊಲ್ಲೆ ||
ಕೀಲನರಿತು ಹರಿಭಕುತಿಯನು ಮಾಳ್ಪ ಪರಮ ಚಾಂ |
ಡಾಲನ ಮನೆ ಬಾಗಿಲ ಕಾಯಿಸೆನ್ನ ||೪||

ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದು |
ಘೋರ ನರಕದಿ ಬೀಳುವುದನು ನಾನೊಲ್ಲೆ ||
ವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯ |
ದ್ವಾರಪಾಲಕನೆಂದೆನಿಸೆನ್ನ ||೫||

ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ |
ಚಿಟ್ಟ ವಸ್ತ್ರ ಉಡುವುದನೊಲ್ಲೆ ||
ನೆಟ್ಟನೆ ಕಾವಿ ಕಾಷಾಯಾಂಬರಗಳನು |
ಉಟ್ಟವರ ಬಂಟನೆಂದೆನಿಸೆನ್ನ ||೬||

ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯ |
ತೀರ್ಥಯಾತ್ರೆಯ ಮಾಡಲೊಲ್ಲೆ ||
ದೈತ್ಯಮರ್ದನ ಬಾಡದಾದಿಕೇಶವ ನಿನ್ನ |
ಕೀರ್ತನಗೈವರ ಸ್ತುತಿಕನೆನಿಸೆನ್ನ ||೭||

Lyrics in English

Deshadhipati Narahariye ninnaya pada |
Dasara dasanendenisabenna ||

Rajatamoguna pravartaka mulantaradim |
Yajamanatanadahankaravanu olle ||
Bhuja chakra dharisi sattvikara padambuja |
Raja bhajakara bhajakanendenisenna ||

Sirigandha kumkuma sadu javvaji ka |
Tthuri tilakavaniduvada nanolle ||
Siri urdhvapundra dvadashanamaviduvara |
Paricharakara paricharakanenisenna ||

Svadu kalpitavada bhakshya bhojyagalanu |
Adarada amritanna unuvudanolle |
Bodheyanu heluva keluva haridasara |
Padatirtha prasadavanunisenna ||

Kala karmadolupeksheya madi haribhakuti |
Shilarahita brahmananagalolle ||
Kilanaritu haribhakutiyanu malpa parama chan |
Dalana mane bagila kayisenna ||

Krurashastravanodi kuri konavane kadidu |
Ghora narakadi biluvudanu nanolle ||
Varijaksha ninna charana sevakara maneya |
Dvarapalakanendenisenna ||

Pattepattavali divya dukula mim |
Chitta vastra uduvudanolle ||
Nettane kavi kashayambaragalanu |
Uttavara bantanendenisenna ||

Artha vishayangala phalapeksheyim punya |
Tirthayatreya madalolle ||
Daityamardana Baadada Adikeshava ninna |
Kirtanagaivara stutikanenisenna ||

ಏಕೆ ಚಿಂತಿಸುತಿರುವೆ ಕೋತಿಮನವೆ / Eke Chintisutiruve Kotimanave

ಏಕೆ ಚಿಂತಿಸುತಿರುವೆ ಕೋತಿಮನವೆ |
ಶ್ರೀ ಕೃಷ್ಣರಾಯನನು ಸ್ತುತಿಸಲೊಲ್ಲದಲೆ ||ಪ||

ಹುಟ್ಟಿದಾಗುತ್ಪತ್ತಿಗಾರು ಚಿಂತಿಸಿದವರು |
ಕಟ್ಟಕಡೆಯಲಿ ಲಯಕೆ ಏನು ಚಿಂತೆ ||
ನಟ್ಟನಡುವಿನ ಬದುಕಿಗೇಕೆ ಚಿಂತಿಸುತಿರುವೆ |
ಕಟ್ಟಕಡೆಯಲಿ ಮೂರು ಬಟ್ಟೆ ತಾನಲ್ಲವೆ ||೧||

ನವಿಲಿಂಗೆ ಚಿತ್ರಪತ್ರವನಾರು ಬರೆದವರು |
ಪವಳಜಾತಿಗೆ ಕೆಂಪನಾರಿತ್ತರು ||
ಸವಿಮಾತಿನರಗಿಳಿಗೆ ಹಸಿರಾರು ಬರೆದವರು |
ಇವ ಮಾಡಿದವ ಕೃಷ್ಣ ನಮ್ಮ ಮರೆದಿಹನೆ ||೨||

ಬಸಿರೊಳಗೆ ಇದ್ದಾಗ ಶಿಶುವ ಹೊರೆದವರಾರು |
ವಸುಧೆಯನು ಬಸಿರೊಳಗೆ ಹೆತ್ತರಾರು ||
ವಸುದೇವಸುತ ನಮ್ಮ ಪುರಂದರವಿಠಲನ |
ಪೆಸರ ಬಸಿರೊಳಗಿಟ್ಟು ಸ್ತುತಿಸುತಿರು ಮನವೆ ||೩||

ಕೃತಿಕಾರರು : ಶ್ರೀ ಪುರಂದದಾಸರು

Lyrics in English

Eke Chintisutiruve Kotimanave

Eke chintisutiruve kotimanave |
Shri Krishnarayananu stutisalolladale ||

Huttidagutpattigaru chintisidavaru |
Kattakadeyali layake enu chinte ||
Nattanaduvina badukigeke chintisutiruve |
Kattakadeyali muru batte tanallave ||

Navilinge chitrapatravanaru baredavaru |
Pavalajatige kempanarittaru ||
Savimatinaragilige hasiraru baredavaru |
Iva madidava Krishna namma maredihane ||

Basirolage iddaga shishuva horedavararu |
Vasudheyanu basirolage hettararu ||
Vasudevasuta namma Purandaravithalana |
Pesara basirolagittu stutisutiru manave ||

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಳ ಗುಣ ಸದ್ಧಾಮ ಮಧ್ವನಾಮ ||ಪ||

ಆವ ಕಚ್ಚಪ ರೂಪದಿಂದ ಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೆಯ್ದುವರು
ಆ ವಾಯು ನಮ್ಮ ಕುಲಗುರುರಾಯನು ||1||

ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ||2||

ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳುವರು ಬುಧಜನ ||3||

ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲತಿಲಕ ಮುಖ್ಯ ಪವಮಾನನು ||4||

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೋಕದೊಳಗೆ ||5||

ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ
ಉರವಣಿಸಿ ಹಿಂದು ಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ ||6||

ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪಠಿಸಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ||7||

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ||8||

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ ||9||

ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿ ಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ ||10||

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜಭಕುತಿಯನೆ ಬೇಡಿ ವರವ ಪಡೆದ ||11||

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮನಮ್ಮ ಕುಲಗುರು ರಾಯನು ||12||

ಕರದಿಂದಶಿಶುಭಾವನಾದ ಭೀಮನ ಬಿಡಲು
ಗಿರಿವಡೆದುಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ಸುರ ನರರು ಸರಿಯೇ ||13||

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ||14||

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ||15||

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯ ಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ ||16||

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬ್ಯಾಗ
ಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ ||17||

ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನಾ
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ
ಕುರುಪನಟ್ಟಿದ ಮಲ್ಲಕುಲವ ಸದೆದ ||18||

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ
ವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ ||19||

ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ||20||

ಚಂಡ ವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲಾ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡುನಿಲ್ಲುವರಾರು ತ್ರಿಭುವನದೊಳು ||21||

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ||22||

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ||23||

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿ ಗೀರ್ವಾಣ ಸಂತತಿಯಲಿ ||24||

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯ್ಯೆದಿದ ಮಧ್ವಮುನಿರಾಯಗಭಿವಂದಿಪೆ ||25||

ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡ
ಜಯಜಯತು ವಾದಿಗಜ ಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತ ಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ || 26 ||

ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಂಗವಿಲ್ಲದೆ ಸುಖದ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ
ಶ್ರೀ ರಂಗ ವಿಠ್ಠಲನೆಂದು ನೆರೆ ಸಾರಿರೈ || 27 ||

ಮಧ್ವನಾಮ ಶ್ರೀ ಜಗನ್ನಾಥ ದಾಸರ ಫಲಶ್ರುತಿ

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತೀರದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ||1||

ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರಪಮೃತ್ಯು ಬರಲಂಜವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ||2||

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪಕಳೆದಖಿಳ ಸೌಖ್ಯವನೀವುದು
ಶ್ರೀಪತಿ *ಜಗನ್ನಾಥವಿಠಲನ* ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು  ||3||