ಇದ ಕೊಳ್ಳಿ ಇದಕೊಳ್ಳಿ ಭವರೋಗಕೌಷಧವನು / Ida kolli idakolli bhavarogakoushadhavanu

ಇದ ಕೊಳ್ಳಿ ಇದಕೊಳ್ಳಿ ಭವರೋಗಕೌಷಧವನು ||ಪ||

ಇಂದ್ರಿಯವಜೈಸುವುದೆ ಇದಕೆ ಇಚ್ಛಾಪಥ್ಯ ||ಅ||

ವಾಸುದೇವನ ನಾಮ ವಾತವಿಧ್ವಂಸಿನಿ
ಜನಾರ್ದನನ ನಾಮ ಜ್ವರಾಂಕುಶ
ಮಾಧವನ ನಾಮವೇ ಮನಗಂಡ ಮಂಡೂರ
ಮಂಗಳಾತ್ಮಕ ನಾಮ ಮಾಲ್ಯವಸಂತ ||

ಚಿಂತಾಯಕನ ನಾಮ ತ್ರೈಲೋಕ್ಯ ಚಿಂತಾಮಣಿ
ಭುಜಗಶಯನನ ನಾಮ ಭೂಪತಿಮಾತ್ರೆ
ರಾಜೀವಲೋಚನನ ನಾಮ ರಸಕರ್ಪೂರ
ಸೀತಾಪತಿಯ ನಾಮ ದಿವ್ಯ ಸಿಂಧೂರ ||

ನಾರಾಯಣನ ನಾಮ ದಿವ್ಯ ತಾಮ್ರಭಸ್ಮ
ಲೋಕದೊಡೆಯನ ನಾಮ ಲೋಹಭಸ್ಮ
ವೈಕುಂಠಪತಿಯೆಂಬ ವಂಗಭಸ್ಮವ ಕೊಳ್ಳಿ
ಶ್ರೀನಿವಾಸನ ನಾಮ ಸ್ವರ್ಣಭಸ್ಮ ||

ರಾಮಚಂದ್ರನೆಂಬ ಪೂರ್ಣಚಂದ್ರೋದಯವು
ಕೃಷ್ಣಕೃಷ್ಣನೆಂಬ ಶ್ಲೇಷ್ಮಕುಠಾರ
ವಾರಿಜಾಂಬಕನೆಂಬ ವಸಂತಕುಸುಮಾಕರ
ಕಮಲನಾಭನೆಂಬ ಕರ್ಣಚೂರ್ಣವಿದಕೊ ||

ಇದನು ಕೊಂಡವರ ಪೆಸರನು ಪೇಳುವೆನು ಕೇಳಿ
ಮುದದಿ ಪ್ರಹ್ಲಾದ ಮುಚುಕುಂದ ಧ್ರುವನು
ಸದಮಲೆ ದ್ರೌಪದಿಯು ಅಜಮಿಳನು ಬದುಕಿದರು
ಪದುಮಾಕ್ಷ ಪುರಂದರವಿಠಲನೆಂಬೌಷಧವ ||

ಶ್ರೀ ಪುರಂದರ ದಾಸರ ಕೃತಿ

Lyrics in English

Ida koḷḷi idakoḷḷi bhavarōgakauṣadhavanu ||pa||

Indriyajaisuvude idake icchāpathya ||a.pa||

Vāsudēvana nāma vātavidhvamsini
Janārdanana nāma jvarānkuśa
Mādhavana nāmavē managaṇḍa maṇḍūra
Mangaḷātmaka nāma mālyavasanta ||

Chintāyakana nāma trailōkya chintāmaṇi
Bhujagaśhayanana nāma bhūpatimātre
Rājīvalōchanana nāma rasakarpūra
Sītāpatiya nāma divya sindhūra ||

Nārāyaṇana nāma divya tāmrabhasma
Lōkadōḍeyana nāma lōhabhasma
Vaikuṇṭhapatiyemba vangabhasmava koḷḷi
Śrīnivāsana nāma svarṇabhasma ||

Rāmachandranemba pūrṇachandrōdayavu
Kṛṣhṇakṛṣṇanemba ślēṣhmakuṭhāra
Vārijāmbakanemba vasantakusumākara
Kamalanābhanemba karṇacūrṇavidako ||

Idanu koṇḍavara pesarana pēḷuvenu kēḷi
Mudadi prahlāda muchukunda dhruvanu
Sadamale draupadiyu ajamiḷanu badukidaru
Padumākṣha purandaraviṭhalanembauṣadhava ||

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಳ ಗುಣ ಸದ್ಧಾಮ ಮಧ್ವನಾಮ ||ಪ||

ಆವ ಕಚ್ಚಪ ರೂಪದಿಂದ ಲಂಡೋದಕವ
ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೆಯ್ದುವರು
ಆ ವಾಯು ನಮ್ಮ ಕುಲಗುರುರಾಯನು ||1||

ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು ||2||

ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳುವರು ಬುಧಜನ ||3||

ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲತಿಲಕ ಮುಖ್ಯ ಪವಮಾನನು ||4||

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೋಕದೊಳಗೆ ||5||

ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ
ಉರವಣಿಸಿ ಹಿಂದು ಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ ||6||

ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪಠಿಸಿದ
ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ||7||

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು ||8||

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ ||9||

ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿ ಕುಲತಿಲಕನಾಜ್ಞೆಯ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ ||10||

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜಭಕುತಿಯನೆ ಬೇಡಿ ವರವ ಪಡೆದ ||11||

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮನಮ್ಮ ಕುಲಗುರು ರಾಯನು ||12||

ಕರದಿಂದಶಿಶುಭಾವನಾದ ಭೀಮನ ಬಿಡಲು
ಗಿರಿವಡೆದುಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ಸುರ ನರರು ಸರಿಯೇ ||13||

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ ||14||

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರಸಿದ ಲೋಕಕಂಟಕರನು
ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ ||15||

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯ ಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ ||16||

ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬ್ಯಾಗ
ಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ ||17||

ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನಾ
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ
ಕುರುಪನಟ್ಟಿದ ಮಲ್ಲಕುಲವ ಸದೆದ ||18||

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ
ವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ ||19||

ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ||20||

ಚಂಡ ವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲಾ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡುನಿಲ್ಲುವರಾರು ತ್ರಿಭುವನದೊಳು ||21||

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ ||22||

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ||23||

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ
ಶರ್ವಾದಿ ಗೀರ್ವಾಣ ಸಂತತಿಯಲಿ ||24||

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯ್ಯೆದಿದ ಮಧ್ವಮುನಿರಾಯಗಭಿವಂದಿಪೆ ||25||

ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡ
ಜಯಜಯತು ವಾದಿಗಜ ಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತ ಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ || 26 ||

ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ
ಭಂಗವಿಲ್ಲದೆ ಸುಖದ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ
ಶ್ರೀ ರಂಗ ವಿಠ್ಠಲನೆಂದು ನೆರೆ ಸಾರಿರೈ || 27 ||

ಮಧ್ವನಾಮ ಶ್ರೀ ಜಗನ್ನಾಥ ದಾಸರ ಫಲಶ್ರುತಿ

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತೀರದಿ
ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ ||1||

ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರಪಮೃತ್ಯು ಬರಲಂಜವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ ||2||

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ
ತಾಪಕಳೆದಖಿಳ ಸೌಖ್ಯವನೀವುದು
ಶ್ರೀಪತಿ *ಜಗನ್ನಾಥವಿಠಲನ* ತೋರಿ ಭವ
ಕೂಪಾರದಿಂದ ಕಡೆ ಹಾಯಿಸುವುದು  ||3||

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ / Enthu Ninna pooje Madi mecchisuveno

ಎಂತು ನಿನ್ನ ಪೂಜೆ ಮಾಡಿ ಮೆಚ್ಚಿಸುವೆನೊ ||ಪ||

ಚಿಂತಾಯತನೆ ನಿನ್ನ ನಾಮ ಎನಗೊಂದು ಕೋಟಿ ||ಅ.ಪ||

ಪವಿತ್ರೋದಕದಿ ಪಾದ ತೊಳೆವೆನೆಂತೆಂದರೆ |
ಪಾವನೆಯಾದ ಗಂಗೆ ಪಾದೋದ್ಭವೆ ||
ನವಕುಸುಮವ ಸಮರ್ಪಿಸುವೆನೆಂದರೆ ಉದು |
ಭವಿಸಿಹನು ಅಜ ನಿನ್ನ ಪೊಕ್ಕುಳ ಹೂವಿನಲಿ ||೧||

ದೀಪವನು ಬೆಳಗುವೆನೆ ನಿನ್ನ ಕಂಗಳು ಸಪ್ತ |
ದ್ವೀಪಂಗಳೆಲ್ಲವನು ಬೆಳೆಗುತಿಹವೋ ||
ಆಪೋಶನವನಾದರೀವೆನೆಂತೆಂಬೆನೆ |
ಆಪೋಶನವಾಯ್ತು ಏಳು ಅಂಬುಧಿಯು ||೨||

ಕಾಣಿಕೆಯಿತ್ತಾದರೂ ಕೈ ಮುಗಿವೆನೆಂದರೆ |
ರಾಣಿವಾಸವು ಸಿರಿದೇವಿ ನಿನಗೆ ||
ಮಾಣದೆ ಮನದೊಳು ನಿನ್ನ ನಾಮಸ್ಮರಣೆ |
ಧ್ಯಾನವನು ದಯೆ ಮಾಡೋ ಪುರಂದರವಿಠಲ ||೩||

ಕೃತಿಕಾರರು : ಶ್ರೀ ಪುರಂದದಾಸರು

Entu Ninna Pooje Maadi Mecchuveno

Entu ninna pooje maadi mecchuveno || Pa ||

Chintaayatane ninna naama enagondu koti || A.pa ||

Pavitrodakadi paada toleventendare |
Paavaneyaada Gange paadodbhave ||
Navakusumava samarpisuvenendare
udbhavisihanu Aja ninna pokkula hoovinali || 1 ||

Deepavanu belaguvene ninna kangalu sapta |
Dweepangalellavanu belegutihavo ||
Aaposhanavanaadaareeve nentembene |
Aaposhanavaaytu elu ambudhiyu || 2 ||

Kaanikeyittaadaru kai mugivenedare |
Raanivaasavu Siridevi ninage ||
Maanade manadolu ninna naamasmarane |
Dhyaanavanu daye maado Purandara Vithala || 3 ||