ಹಾಡುತಿಹಳು ನೇತ್ರಾವತಿ ಕೇಳಿ ಬನ್ನಿ ಮಂಜುನಾಥ ದೇವನಿಗೆ ಜಯ ಜಯವೆನ್ನಿ | ಭಕ್ತಿಯಿಂದ ಹರಕೆ ಹೊತ್ತು ಕಾಣಿಕೆ ತನ್ನಿ | ಪ್ರೀತಿಯಿಂದ ನಡೆದು ಸುಕೃತ ಫಲವ ತಿನ್ನಿ || ಹಾಡುತಿಹಳು||
ಮಂಜುನಾಥನರಿಯದ ಮರ್ಮವಿಲ್ಲ ಮಂಜುನಾಥ ಮಾಡದ ಧರ್ಮವಿಲ್ಲ | ಅನ್ನದಾತ ಬುದ್ದಿದಾತ ಮಂಜುನಾಥ | ಕಷ್ಟದಲ್ಲಿ ಬಂದು ಕೈ ಹಿಡಿಯುವಾತ | ಇಲ್ಲಿ ಬಂದು ಧನ್ಯರಾಗಿ ಎನ್ನುವುದೀ ನದಿ | ಕಲಿಯ ರೋಷ ನೀಗಿದೆ ಶಿವನ ಸನ್ನಿಧಿ | ದಯೆಯು ಧರ್ಮ ಸತ್ಯವೇ ಇಲ್ಲಿ ತಳಹದಿ | ಭಕ್ತಿಜ್ಯೋತಿ ತರುವದೀ ಬಾಳ ನವನಿಧಿ || ಹಾಡುತಿಹಳು ||
ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ| ಎಂದಿಗಾದರೊಂದು ದಿನ ಸಾವು ತಪ್ಪದೂ…||ಎಂದಿ|| ಸಾವು ತಪ್ಪದು….ಸಾವು ತಪ್ಪದೂ
ಹುಟ್ಟುತೇನು ತರಲಿಲ್ಲ ಸಾಯುತೇನು ಒಯ್ಯಲಿಲ್ಲ| ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ| ಹೊಟ್ಟೆ ಬಲುಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು | ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು| ||ಡಿಂಬದಲ್ಲಿರುವ||
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ| ಅರ್ಥಕ್ಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು| ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆ| ಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ| ||ಡಿಂಬದಲ್ಲಿರುವ||
ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ| ಅಣ್ಣತಮ್ಮ ತಾಯಿ ತಂದೆ ಬಯಸಲಾಗದು| ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ| ಮಣ್ಣುಪಾಲು ಆದಮೇಲೆ ಯಾರಿಗಾಹುದೊ| ||ಡಿಂಬದಲ್ಲಿರುವ||
ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು| ಚಳ್ಳಪಿಳ್ಳ ಗೊಂಬೆಯಂತೆ ಆಡಿ ಹೋದೆನೆ| ಹಳ್ಳ ಹರಿದು ಹೋಗುವಾಗ ಗುಳ್ಳೆ ಒಂದು ಒಡೆಯುವಂತೆ| ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ| ||ಡಿಂಬದಲ್ಲಿರುವ||
ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯ| ವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು| ಕರ್ತೃ ಕಾಗಿನೆಲೆಯಾದಿ ಕೇಶವನ ಚರಣಕಮಲ| ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ | ||ಡಿಂಬದಲ್ಲಿರುವ||